ಬೆರಳೊತ್ತು
ಬೆರಳಿನ ತುದಿಭಾಗದ ಒಳಮೈ ಮೇಲಿನ ರೇಖಾ ನಮೂನೆಯ ಅಚ್ಚು (ಫಿಂಗರ್ ಪ್ರಿಂಟ್). 1858ರಲ್ಲಿ ಮೊತ್ತಮೊದಲಿಗೆ ಭಾರತದಲ್ಲಿ ವಿಲಿಯಮ್ ಹರ್ಷಲ್ ಎಂಬಾತ ಬೆರಳೊತ್ತು ಪರೀಕ್ಷಿಸಿ ವ್ಯಕ್ತಿಯ ಗುರುತು ಖಾತರಿಯಾಗಿ ಪತ್ತೆ ಹಚ್ಚಿ ನಕಲಿ ವೇಷಧಾರಣೆಯ ಮೋಸ ತಡೆಯುವ ವಿಧಾನ ಬೆಳಕಿಗೆ ತಂದ. 1892ರಲ್ಲಿ ಫ್ರಾನ್ಸಿಸ್ ಗಾಲ್ಟನ್ ಎಂಬ ಆಂಗ್ಲ ಮಾನವ ಶಾಸ್ತ್ರಜ್ಞ ಬೆರಳೊತ್ತು ಪದ್ದತಿಯ ಮೂಲಕ ವ್ಯಕ್ತಿಯ ಗುರುತು ಹಿಡಿಯುವ ವಿಧಾನವನ್ನು ಕ್ರಮಬದ್ಧಗೊಳಿಸಿದ. ಇದನ್ನು ಇಂಗ್ಲೆಂಡಿನಲ್ಲಿ 1894 ರಿಂದ ಅಧಿಕೃತವಾಗಿ ಅಳವಡಿಸಿಕೊಳ್ಳಲಾಗಿದೆ. 

	ಎಡ್ವರ್ಡ್ ಹೆನ್ರಿಯ ಸಂಶೋಧನೆಯ ಫಲವಾಗಿ ಭಾರತದಲ್ಲಿ ಬೆರಳೊತ್ತು ವಿಜ್ಞಾನ ಮತ್ತಷ್ಟು ಅಭಿವೃದ್ಧಿಗೊಂಡಿತು. ಈಗ ಪ್ರಪಂಚದ ಎಲ್ಲ ಕಡೆಗಳಲ್ಲೂ ಅಪರಾಧ ಶೋಧನೆಯಲ್ಲಿ ಈ ಪದ್ಧತಿ ರೂಢಿಗೆ ಬಂದಿದೆ. ಹಿಂದೆ ಪುರಾತನ ಅಸ್ಸೀರಿಯಾದಲ್ಲಿ ಈ ವಿಧಾನ ತಿಳಿದಿತ್ತು. ಕ್ರಿ.ಶ. 700 ರಷ್ಟು ಹಿಂದೆಯೇ ವ್ಯಕ್ತಿಗಳ ಗುರುತು ಹಚ್ಚಲು ಇದನ್ನು ಬಳಸಲಾಗುತ್ತಿತ್ತು. ಚೀನಾದ ಪೊಲೀಸರು 13ನೆಯ ಶತಮಾನದಲ್ಲಿಯೇ ಬೆರಳೊತ್ತಿನ ಪದ್ಧತಿಯನ್ನು ಉಪಯೋಗಿಸುತ್ತಿದ್ದರು. ಭಾರತದಲ್ಲಿ 1899ರ ಸುಮಾರಿಗೆ ಇಂಡಿಯನ್ ಕೌನ್ಸಿಲ್ಲಿನಿಂದ ಜಾರಿಗೆ ಬಂದ ಕಾನೂನು ಬೆರಳೊತ್ತಿನ ತಜ್ಞ ನೀಡುವ ಸಾಕ್ಷ್ಯಕ್ಕೆ ಬೆಂಬಲ ನೀಡಿತ್ತು. ಬೆರಳ ತುದಿಯ ಉಬ್ಬು ಭಾಗದ (ಬಾಲ್ ಆಫ್ ಫಿಂಗರ್) ಒತ್ತುಗುರುತೇ ಬೆರಳೊತ್ತು. ಬೆರಳುಗಳ ಉಬ್ಬುಭಾಗದ ಚರ್ಮದ ಮೇಲಿರುವ ಸೂಕ್ಷ್ಮವಾದ ಗೆರೆಗಳ ನ್ಯಾಸವಿದು (ಪ್ಯಾಪಿಲರಿ ರಿಡ್ಜಸ್). ಬೆರಳುಗಳ ಚರ್ಮದ ಗೆರೆಗಳ ವಿನ್ಯಾಸ ಬೆವರು ಗ್ರಂಥಿ ನಾಳಗಳ ಮೇಲೆ ಕಿಕ್ಕಿರಿದು ಸೂಕ್ಷ್ಮ ರಂಧ್ರಗಳಿಂದ ಕೂಡಿದೆ. ಇವು ಶಾಶ್ವತ. ಪ್ರತಿಯೊಬ್ಬ ವ್ಯಕ್ತಿಯ ಬೆರಳಿನ ಗೆರೆಗಳ ನಿರ್ದಿಷ್ಟ ಅಂತರದಲ್ಲಿ ಇವುಗಳ ಗಾತ್ರ, ಆಕಾರ, ಸ್ಥಾನ, ಮತ್ತು ಸಂಖ್ಯೆ ಬೇರೆ ಬೇರೆ. ಎಂದೇ ಇವು ವ್ಯಕ್ತಿಯ ಗುರುತನ್ನು ರುಜುವಾತುಪಡಿಸಲು ಖಾತರಿ ಚಹರೆಗಳು. ಬೆರಳಿನ ತುದಿಯಲ್ಲಿರುವ ಗೆರೆಗಳ ವಿನ್ಯಾಸ ವ್ಯವಸ್ಥೆಯನ್ನು ಆಧರಿಸಿ ಬೆರಳೊತ್ತು ವಿನ್ಯಾಸಗಳನ್ನು ಪ್ರಮುಖವಾಗಿ ನಾಲ್ಕು ಪ್ರಕಾರಗಳಲ್ಲಿ ವರ್ಗೀಕರಿಸಿದೆ: ಕಮಾನು, ವಂಕಿ, ಸುರುಳಿ, ಸಂಕೀರ್ಣ, ಮೊದಲ ಮೂರು ಒಂದಕ್ಕಿಂತ ಹೆಚ್ಚಾಗಿ ಸೇರಿರುವ ಮಿಶ್ರಿತ ವಿನ್ಯಾಸವೇ ಸಂಕೀರ್ಣ.

ಚಿತ್ರ-1

ಸತತವಾಗಿ ಹರಿಯುವ ಬೆವರಿನಿಂದ ಚರ್ಮ ಯಾವಾಗಲೂ ಒದ್ದೆ ಆಗಿರುತ್ತದೆ. ವ್ಯಕ್ತಿ ಉದ್ವೇಗಗೊಂಡಾಗ ಬೆವರಿನ ಪ್ರಮಾಣ ಇನ್ನೂ ಹೆಚ್ಚುತ್ತದೆ. ಬೆವರಿನಲ್ಲಿ ಕೊಬ್ಬು ಇರುವುದರಿಂದ ಬೆರಳಿನ ಯಾವುದೇ ಭಾಗ ನಯವಾದ ಜಾಗದ ಮೇಲೆ ಒತ್ತಿದಾಗ ಉಂಟಾಗುವ ಜಿಡ್ಡಿನ ಮುದ್ರೆಯೇ ಬೆರಳೊತ್ತು. ಸಮರ್ಪಕ ತಂತ್ರ ಬಳಸಿ ಇಂಥ ಮುದ್ರೆಗಳನ್ನು ಛಾಯಾ ಚಿತ್ರಗಳಿಂದ ಲಂಬಿಸಿ ದಾಖಲು ಮಾಡಿಕೊಳ್ಳುತ್ತಾರೆ. 
	ಬೆರಳೊತ್ತಿನ ಮೂಲಕ ಗುರುತು ಹಚ್ಚುವ ಪದ್ಧತಿಯ ನಿಷ್ಕøಷ್ಟತೆ ಈ ಮುಂದಿನ ಸಂಗತಿಗಳನ್ನು ಅವಲಂಬಿಸಿದೆ:

ಚಿತ್ರ-2

1. ಹುಟ್ಟುವ ಮೊದಲಿನಿಂದ ಸತ್ತ ಮೇಲೆ ದೇಹ ಸಂಪೂರ್ಣವಾಗಿ ನಾಶವಾಗುವ ತನಕವೂ ಗೆರೆಗಳ ವಿನ್ಯಾಸ ಮತ್ತು ವೈಲಕ್ಷಣ್ಯಗಳು ಅಳಿಸಿಹೋಗುವುದಿಲ್ಲ.
2. ಯಾವುದೇ ಎರಡು ಪ್ರತ್ಯೇಕ ಬೆರಳೊತ್ತುಗಳು ನಿಷ್ಕøಷ್ಟವಾಗಿ ಒಂದೇ ಬಗೆಯ ಗೆರೆಗಳ (ಪ್ಯಾಪಿಲರಿ ರಿಡ್ಜಸ್) ವ್ಯವಸ್ಥೆ ಮತ್ತು ಆಕಾರ ಹೊಂದಿರುವುದಿಲ್ಲ.
3. ಒಂದೇ ರೀತಿಯಲ್ಲಿ ಹೋಲುವ ಅವಳಿಗಳಲ್ಲಿ ಸಹ ಈ ವಿನ್ಯಾಸ ವಿಭಿನ್ನವಾಗಿರುತ್ತದೆ.
4. ಆಕಸ್ಮಿಕವಾಗಿ ಒಂದೇ ರೀತಿಯ ವಿನ್ಯಾಸವಿರುವುದು ಅತ್ಯಂತ ಅಪರೂಪವಾದುದೆಂದು ಗಣಿತದ ಲೆಕ್ಕಾಚಾರಗಳು ಸೂಚಿಸುತ್ತವೆ.

ಬೆರಳೊತ್ತು ಪದ್ಧತಿಯನ್ನು ಈ ಮುಂದಿನ ಸಂದರ್ಭಗಳಲ್ಲಿ ಬಳಸಬಹುದು:
1. ಅಪರಾಧಿಯ ಗುರುತು ರುಜುವಾತುಪಡಿಸಲು ಅಪರಾಧ ನಡೆದ ಸ್ಥಳದಲ್ಲಿ ಆಯುಧ, ಪೀಠೋಪಕರಣ, ಪಡಿ, ಪಾತ್ರೆ ಮುಂತಾದವುಗಳ ಮೇಲೆ ಕಂಡು ಬರುವ ಬೆರಳೊತ್ತುಗಳ ಹೊಂದಾಣಿಕೆ.
2. ಆತ್ಮಹಂತಕರು, ಓಡಿಹೋದವರು, ಸ್ಮøತಿ ಕಳೆದುಕೊಂಡು ನರಳುವ ವ್ಯಕ್ತಿಗಳು ಅಥವಾ ಯಾವುದೇ ಅಪಘಾತಕ್ಕೀಡಾಗಿ ಅನಂತರ ಮೃತರಾದವರು, ಮತ್ತು ನಶಿಸುತ್ತಿರುವ ಮೃತ ದೇಹಗಳನ್ನು ಗುರುತು ಹಿಡಿಯುವುದು.
3. ಆಗತಾನೇ ಹುಟ್ಟಿದ ಶಿಶುಗಳು ಆಕಸ್ಮಿಕವಾಗಿ ಅದಲು ಬದಲಾಗುವ ಸಂದರ್ಭದಲ್ಲಿ ಅವನ್ನು ಪ್ರತ್ಯೇಕಿಸಿ ಗುರುತು ಹಿಡಿಯುವುದು.
4.	ಗುರುತಿನ ದಾಖಲೆಗಳನ್ನು ಇಡುವುದು.
5.	ನಕಲಿ ವೇಷಧಾರಣೆಯನ್ನು ತಡೆಗಟ್ಟುವುದು.
6.	ಚೆಕ್ಕುಗಳು, ಬ್ಯಾಂಕ್ ನೋಟುಗಳು ಮತ್ತು ಇತರ ಕಾನೂನು ದಸ್ತಾವೇಜುಗಳಲ್ಲಿ ವ್ಯಕ್ತಿಯನ್ನು ಗುರುತಿಸುವುದು.
ಅಪರಾಧಿಗಳಿಂದ ಹತ್ತೂ ಬೆರಳುಗಳ ಗುರುತು ತೆಗೆದುಕೊಳ್ಳಲಾಗುತ್ತದೆ. ಆದರೆ ಸಿವಿಲ್ ಉದ್ದೇಶಗಳಿಗೆ ಎಡ ಹೆಬ್ಬೆರಳಿನ ಗುರುತು ಮಾತ್ರ ಪಡೆಯಲಾಗುತ್ತದೆ.									
	(ಬಿ.ಸಿ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ